ಮಂಗಳೂರು ಮಹಾನಗರ ಪಾಲಿಕೆಯ ಜನನ-ಮರಣ ವಿಭಾಗದ ಭ್ರಷ್ಟಾಚಾರ ಖಂಡನೀಯ - ತಕ್ಷಣ ತನಿಖೆ ನಡೆಸಿ, ತಪ್ಪಿತಸ್ಥರನ್ನು ಅಮಾನತುಗೊಳಿಸಿ: ಉಸ್ಮಾನ್ ಗುರುಪುರ

May 21, 2026 - 21:46
 0  254
ಮಂಗಳೂರು ಮಹಾನಗರ ಪಾಲಿಕೆಯ ಜನನ-ಮರಣ ವಿಭಾಗದ ಭ್ರಷ್ಟಾಚಾರ ಖಂಡನೀಯ - ತಕ್ಷಣ ತನಿಖೆ ನಡೆಸಿ, ತಪ್ಪಿತಸ್ಥರನ್ನು ಅಮಾನತುಗೊಳಿಸಿ: ಉಸ್ಮಾನ್ ಗುರುಪುರ

ಮಂಗಳೂರು ಮಹಾನಗರ ಪಾಲಿಕೆಯ ಜನನ-ಮರಣ ಪ್ರಮಾಣಪತ್ರ ವಿಭಾಗದಲ್ಲಿ ನಡೆಯುತ್ತಿರುವ ಭಾರೀ ಅವ್ಯವಹಾರ, ದಲ್ಲಾಳಿ ದಂಧೆ ಮತ್ತು ಸಾಮಾನ್ಯ ಜನರಿಗೆ ಆಗುತ್ತಿರುವ ಕಿರುಕುಳವನ್ನು SDPI ಮಂಗಳೂರು ನಗರ ಉತ್ತರ ಕ್ಷೇತ್ರ ಸಮಿತಿ ತೀವ್ರವಾಗಿ ಖಂಡಿಸುತ್ತದೆ.

 ಜನನ-ಮರಣ ಪ್ರಮಾಣಪತ್ರ ಪಡೆಯಲು ಬೆಳಗ್ಗೆಯಿಂದ ಸರದಿಯಲ್ಲಿ ನಿಂತ ನೂರಾರು ಜನರನ್ನು ಮಧ್ಯಾಹ್ನ 3 ಗಂಟೆಗೆ "ಇವತ್ತು ಕೇವಲ 20 ಟೋಕನ್ ಮಾತ್ರ" ಎಂದು ವಾಪಸ್ ಕಳಿಸುವ ದರ್ಪ ಮೆರೆಯಲಾಗಿದೆ. ಜನ ವಾರಗಟ್ಟಲೆ ಕಚೇರಿ ಅಲೆದರೂ ಕೆಲಸ ಆಗುತ್ತಿಲ್ಲ. ಅಧಿಕಾರಿಗಳು ಫೈಲ್ ಮುಟ್ಟದ ಕಾರಣ ಬಡ ಜನರು ₹2000-₹5000 ದಲ್ಲಾಳಿಗೆ ಕೊಟ್ಟು ಕೆಲಸ ಮಾಡಿಸಿಕೊಳ್ಳುವ ದುಸ್ಥಿತಿ ಇದೆ.
ಹುಟ್ಟಿದ ಮಗುವಿಗೆ ಆಧಾರ್ ಮಾಡಿಸಲು, ಶಾಲೆಗೆ ಸೇರಿಸಲು ಜನನ ಪ್ರಮಾಣಪತ್ರ ಬೇಕು. ತಂದೆ-ತಾಯಿ ಸತ್ತರೆ ಆಸ್ತಿ, ಇನ್ಶೂರೆನ್ಸ್, ಪೆನ್ಷನ್‌ಗೆ ಮರಣ ಪ್ರಮಾಣಪತ್ರ ಬೇಕು. ಈ ಅಗತ್ಯ ದಾಖಲೆಗೆ ಬಡವನು ರಜೆ ಹಾಕಿ, ಕೂಲಿ ಬಿಟ್ಟು, ಕಚೇರಿ ಮುಂದೆ ಭಿಕ್ಷುಕನಂತೆ ನಿಲ್ಲುವ ಸ್ಥಿತಿಯನ್ನು ಬಿಜೆಪಿ ಆಡಳಿತದ ಪಾಲಿಕೆ ನಿರ್ಮಾಣ ಮಾಡಿದೆ.

*SDPI ಆಗ್ರಹಗಳು:*
1. ಜನನ-ಮರಣ ಪ್ರಮಾಣಪತ್ರ ವಿಭಾಗದ ಎಲ್ಲಾ ಅಧಿಕಾರಿ-ಸಿಬ್ಬಂದಿ ವಿರುದ್ಧ ಲೋಕಾಯುಕ್ತ ತನಿಖೆ ನಡೆಸಿ, ತಪ್ಪಿತಸ್ಥರನ್ನು ತಕ್ಷಣ ಅಮಾನತುಗೊಳಿಸಬೇಕು.
2. ದಲ್ಲಾಳಿ ದಂಧೆಗೆ ಕಡಿವಾಣ ಹಾಕಿ, ಎಲ್ಲಾ ಸೇವೆಗಳನ್ನು 48 ಗಂಟೆಯೊಳಗೆ ಆನ್‌ಲೈನ್ ಮೂಲಕ ವಿತರಿಸುವ ವ್ಯವಸ್ಥೆ ಜಾರಿ ಮಾಡಬೇಕು.
3. ಸಾರ್ವಜನಿಕರಿಗೆ ಆಗಿರುವ ಕಿರುಕುಳಕ್ಕೆ ಪಾಲಿಕೆ ಆಯುಕ್ತರು ಬಹಿರಂಗ ಕ್ಷಮೆ ಕೇಳಬೇಕು.
4. ಟೋಕನ್ ಪದ್ಧತಿ ರದ್ದುಪಡಿಸಿ, ಬಂದ ಎಲ್ಲಾ ಅರ್ಜಿಗಳನ್ನು ಅದೇ ದಿನ ವಿಲೇವಾರಿ ಮಾಡುವ "Zero Pendency" ನೀತಿ ಜಾರಿ ಮಾಡಬೇಕು.

ಮಂಗಳೂರು ಪಾಲಿಕೆಯನ್ನು ಬಿಜೆಪಿ "ಭ್ರಷ್ಟಾಚಾರದ ಅಡ್ಡೆ" ಮಾಡಿದೆ. ಕಮಿಷನ್ ಹೊಡೆಯಲು ಕಟ್ಟಡ, ರಸ್ತೆ ಸಾಲದು ಎಂಬಂತೆ, ಈಗ ಹುಟ್ಟು-ಸಾವಿನ ದಾಖಲೆಯಲ್ಲೂ ದಂಧೆ ಶುರು ಮಾಡಿದ್ದಾರೆ. ಇದನ್ನು SDPI ಸಹಿಸುವುದಿಲ್ಲ.

ಒಂದು ವಾರದೊಳಗೆ ಈ ಅವ್ಯವಹಾರ ಸರಿಪಡಿಸದಿದ್ದರೆ, ಸಾವಿರಾರು ಸಂತ್ರಸ್ತರೊಂದಿಗೆ ಮಂಗಳೂರು ಮಹಾನಗರ ಪಾಲಿಕೆಗೆ ಮುತ್ತಿಗೆ ಹಾಕಿ ಉಗ್ರ ಹೋರಾಟ ನಡೆಸುತ್ತೇವೆ ಎಂದು ಈ ಮೂಲಕ ಎಚ್ಚರಿಕೆ ನೀಡುತ್ತೇವೆ.
  
*ಉಸ್ಮಾನ್ ಗುರುಪುರ*  
ಅಧ್ಯಕ್ಷರು, SDPI ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರ

What's Your Reaction?

Like Like 1
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0