ಮತ್ತೆ ಏರಿದ ಇಂಧನ ದರ: ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಭಾರೀ ಹೆಚ್ಚಳ; 2 ವಾರಗಳಲ್ಲಿ ರೂ. 7.5 ಏರಿಕೆ, ತೈಲ ಕಂಪನಿಗಳಿಂದ ವಾಹನ ಸವಾರರಿಗೆ ಮತ್ತೆ ಶಾಕ್..!

May 25, 2026 - 08:42
 0  184
ಮತ್ತೆ ಏರಿದ ಇಂಧನ ದರ: ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಭಾರೀ ಹೆಚ್ಚಳ; 2 ವಾರಗಳಲ್ಲಿ ರೂ. 7.5 ಏರಿಕೆ, ತೈಲ ಕಂಪನಿಗಳಿಂದ ವಾಹನ ಸವಾರರಿಗೆ ಮತ್ತೆ ಶಾಕ್..!

ನವದೆಹಲಿ: ದೇಶದಲ್ಲಿ ಮತ್ತೆ ಇಂಧನ ದರ ಏರಿಕೆಯ ಹೊರೆ ಜನರ ಮೇಲೆ ಬಿದ್ದಿದೆ. ಸೋಮವಾರ ಪೆಟ್ರೋಲ್ ದರವನ್ನು ಲೀಟರ್‌ಗೆ ರೂ.2.61 ಹಾಗೂ ಡೀಸೆಲ್ ದರವನ್ನು ರೂ.2.71 ಹೆಚ್ಚಿಸಲಾಗಿದ್ದು, ಕಳೆದ ಎರಡು ವಾರಗಳಲ್ಲಿ ಇದು ನಾಲ್ಕನೇ ಬಾರಿ ನಡೆದ ದರ ಏರಿಕೆಯಾಗಿದೆ.

ಮೇ 15ರಿಂದ ಆರಂಭವಾದ ಈ ಸರಣಿ ಏರಿಕೆಯಿಂದ ಒಟ್ಟಾರೆ ಪೆಟ್ರೋಲ್ ಮತ್ತು ಡೀಸೆಲ್ ದರಗಳಲ್ಲಿ ಸುಮಾರು ರೂ.7.5ರಷ್ಟು ಹೆಚ್ಚಳವಾಗಿರುವುದು ಸಾಮಾನ್ಯ ಜನರಲ್ಲಿ ಆತಂಕ ಮೂಡಿಸಿದೆ.

ಇಂಧನ ದರ ಏರಿಕೆಯಿಂದ ಸಾರಿಗೆ ವೆಚ್ಚ, ಆಹಾರ ವಸ್ತುಗಳ ಬೆಲೆ, ಕೈಗಾರಿಕಾ ಉತ್ಪಾದನಾ ವೆಚ್ಚ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಬೆಲೆ ಏರಿಕೆಯ ಭೀತಿ ಎದುರಾಗಿದೆ.

ಹೊಸ ದರ ಪರಿಷ್ಕರಣೆಯ ನಂತರ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ದರ ಲೀಟರ್‌ಗೆ ರೂ.102.12ಕ್ಕೆ ಏರಿಕೆಯಾದರೆ, ಡೀಸೆಲ್ ರೂ.95.20ಕ್ಕೆ ತಲುಪಿದೆ. ಮುಂಬೈನಲ್ಲಿ ಪೆಟ್ರೋಲ್ ರೂ.111.21 ಹಾಗೂ ಡೀಸೆಲ್ ರೂ.97.83 ಆಗಿದೆ.

ಕೊಲ್ಕತ್ತಾದಲ್ಲಿ ಪೆಟ್ರೋಲ್ ರೂ.113.51 ಮತ್ತು ಡೀಸೆಲ್ ರೂ.99.82 ದರಕ್ಕೆ ಮಾರಾಟವಾಗುತ್ತಿದೆ. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಪೆಟ್ರೋಲ್ ದರ ರೂ.108.09 ಹಾಗೂ ಡೀಸೆಲ್ ರೂ.108.09 ಏರಿಕೆಯಾಗಿದೆ. ಇದೇ ರೀತಿ ಚೆನ್ನೈನಲ್ಲಿ ಪೆಟ್ರೋಲ್ ರೂ, 107.77 ಹಾಗೂ ಡೀಸೆಲ್ ರೂ.99.55ಕ್ಕೆ ಏರಿಕೆಯಾಗಿದೆ.

ರಾಜ್ಯ ಸರ್ಕಾರಗಳ ಸ್ಥಳೀಯ ತೆರಿಗೆಗಳು ಬೇರೆಬೇರೆ ಇರುವುದರಿಂದ ಪ್ರತಿ ರಾಜ್ಯದಲ್ಲೂ ದರಗಳಲ್ಲಿ ವ್ಯತ್ಯಾಸ ಕಂಡು ಬರುತ್ತಿದೆ.

ಮೇ 15ರಂದು ಮೊದಲ ಬಾರಿಗೆ ಪೆಟ್ರೋಲ್ ಮತ್ತು ಡೀಸೆಲ್ ದರಗಳನ್ನು ತಲಾ ರೂ.3ರಷ್ಟು ಹೆಚ್ಚಿಸಲಾಗಿತ್ತು. ಬಳಿಕ ಮೇ 19ರಂದು ಸುಮಾರು 90 ಪೈಸೆ ಏರಿಕೆ ಮಾಡಲಾಗಿತ್ತು. ಮೇ 23ರಂದು ಮತ್ತೆ ಪೆಟ್ರೋಲ್‌ಗೆ 87 ಪೈಸೆ ಮತ್ತು ಡೀಸೆಲ್‌ಗೆ 91 ಪೈಸೆ ಹೆಚ್ಚಳವಾಗಿತ್ತು.

ಈಗಿನ ಹೊಸ ಏರಿಕೆಯಿಂದ ಎರಡು ವಾರಗಳ ಅವಧಿಯಲ್ಲಿ ಜನರ ಮೇಲೆ ಭಾರೀ ಹೊರೆ ಬಿದ್ದಂತಾಗಿದೆ. ಹಲವು ತಿಂಗಳುಗಳ ಕಾಲ ಸ್ಥಿರವಾಗಿದ್ದ ಇಂಧನ ದರಗಳು ಏಕಾಏಕಿ ನಿರಂತರವಾಗಿ ಏರಿಕೆಯಾಗುತ್ತಿರುವುದು ವಾಹನ ಸವಾರರು ಮತ್ತು ಮಧ್ಯಮ ವರ್ಗದ ಜನರಿಗೆ ಸಂಕಷ್ಟ ತಂದೊಡ್ಡಿದೆ.

ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಏರಿಕೆಯೇ ಇದಕ್ಕೆ ಪ್ರಮುಖ ಕಾರಣವೆಂದು ತೈಲ ಕಂಪನಿಗಳು ಹೇಳುತ್ತಿವೆ. ಮಧ್ಯಪ್ರಾಚ್ಯದಲ್ಲಿ ಉಂಟಾಗಿರುವ ಉದ್ವಿಗ್ನ ಪರಿಸ್ಥಿತಿ, ಅಮೆರಿಕಾ ಮತ್ತು ಇಸ್ರೇಲ್ ದಾಳಿಗಳ ನಂತರ ಇರಾನ್ ಸುತ್ತಲಿನ ರಾಜಕೀಯ ಮತ್ತು ಯುದ್ಧ ಭೀತಿ, ಹಾರ್ಮುಜ್ ಜಲಸಂಧಿಯಲ್ಲಿ ತೈಲ ಸಾಗಣೆಗೆ ಉಂಟಾದ ಅಡಚಣೆ ಇವೆಲ್ಲವೂ ಕಚ್ಚಾ ತೈಲದ ಬೆಲೆಯನ್ನು ಹೆಚ್ಚಿಸಿವೆ.

ಫೆಬ್ರವರಿ ಅಂತ್ಯದಿಂದ ಜಾಗತಿಕ ಕಚ್ಚಾ ತೈಲದ ದರವು 50 ಶೇಕಡಕ್ಕಿಂತ ಹೆಚ್ಚು ಏರಿಕೆಯಾಗಿದೆ ಎಂದು ವರದಿಗಳು ತಿಳಿಸಿವೆ. ಇದರ ಜೊತೆಗೆ ರೂಪಾಯಿ ಮೌಲ್ಯ ಕುಸಿತ ಭಾರತಕ್ಕೆ ತೈಲ ಆಮದು ವೆಚ್ಚವನ್ನು ಹೆಚ್ಚಿಸಿದೆ.

ಭಾರತದಲ್ಲಿ ಇಂಧನ ಮಾರಾಟದ ಬಹುಪಾಲು ಸರ್ಕಾರಿ ತೈಲ ಕಂಪನಿಗಳ ಕೈಯಲ್ಲಿದೆ. ಇಂಡಿಯನ್ ಆಯಿಲ್ ಕಾರ್ಪೊರೇಷನ್, ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ ದೇಶದ ಸುಮಾರು 90 ಶೇಕಡಾ ಇಂಧನ ಮಾರುಕಟ್ಟೆಯನ್ನು ನಿಯಂತ್ರಿಸುತ್ತಿವೆ.

ಇವುಗಳ ಜೊತೆಗೆ ಖಾಸಗಿ ಕಂಪನಿಗಳಾದ ನಯಾರಾ ಎನರ್ಜಿ, ಶೆಲ್ ಪಿಎಲ್‌ಸಿ ಮತ್ತು ಜಿಯೋ-ಬಿಪಿ ಕೂಡ ತಮ್ಮ ದರಗಳನ್ನು ಹೆಚ್ಚಿಸಿವೆ. ಕೆಲವು ಖಾಸಗಿ ಕಂಪನಿಗಳು ಈಗಾಗಲೇ ಮಾರ್ಚ್ ಮತ್ತು ಏಪ್ರಿಲ್ ತಿಂಗಳಲ್ಲಿ ಭಾರೀ ದರ ಏರಿಕೆ ಮಾಡಿದ್ದವು.

ಇಂಧನ ದರ ಏರಿಕೆ ರಾಜಕೀಯ ವಲಯದಲ್ಲಿಯೂ ಚರ್ಚೆಗೆ ಕಾರಣವಾಗಿದೆ. ವಿರೋಧ ಪಕ್ಷಗಳು ರಾಜ್ಯ ಚುನಾವಣೆಗಳು ಮುಗಿದ ಬಳಿಕ ಮಾತ್ರ ದರ ಏರಿಕೆಯನ್ನು ಜಾರಿಗೆ ತಂದಿದ್ದಾರೆ ಎಂದು ಆರೋಪಿಸಿವೆ.

ಸರ್ಕಾರ ಮಾತ್ರ ಜನರ ಮೇಲೆ ತಕ್ಷಣದ ಹೊರೆ ಬಾರದಂತೆ ಸುಮಾರು ಎರಡು ತಿಂಗಳ ಕಾಲ ತೈಲ ಕಂಪನಿಗಳು ನಷ್ಟವನ್ನು ಸಹಿಸಿಕೊಂಡಿದ್ದವು.

ಪಶ್ಚಿಮ ಬಂಗಾಳ ಸೇರಿದಂತೆ ಕೆಲವು ರಾಜ್ಯಗಳ ಚುನಾವಣಾ ಫಲಿತಾಂಶಗಳ ನಂತರವೇ ದರ ಪರಿಷ್ಕರಣೆ ಆರಂಭವಾದ ಕಾರಣ ರಾಜಕೀಯ ಆರೋಪ-ಪ್ರತ್ಯಾರೋಪಗಳು ಹೆಚ್ಚಾಗಿವೆ.

ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆಯಿಂದ ಮುಂದಿನ ದಿನಗಳಲ್ಲಿ ಬಸ್, ಆಟೋ, ಟ್ಯಾಕ್ಸಿ ದರಗಳೂ ಏರಬಹುದಾದ ಸಾಧ್ಯತೆ ಇದೆ. ಸರಕು ಸಾಗಣೆ ವೆಚ್ಚ ಹೆಚ್ಚಾದರೆ ತರಕಾರಿ, ಹಣ್ಣು, ದಿನಸಿ ಸೇರಿದಂತೆ ಸಾಮಾನ್ಯ ಬಳಕೆಯ ವಸ್ತುಗಳ ಬೆಲೆಯೂ ಹೆಚ್ಚಾಗುವ ಸಾಧ್ಯತೆ ಇದೆ. ಈಗಾಗಲೇ ದುಬಾರಿ ಜೀವನದಿಂದ ಬಳಲುತ್ತಿರುವ ಜನರಿಗೆ ಈ ಇಂಧನ ದರ ಏರಿಕೆ ಮತ್ತೊಂದು ದೊಡ್ಡ ಹೊರೆ ಆಗಿದೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 1
Sad Sad 0
Wow Wow 0